ಸ್ವಿಗ್ಗಿ - ಝೊಮ್ಯಾಟೊ ಬಹಿಷ್ಕಾರ: ತಾತ್ಕಾಲಿಕ ಮುಂದೂಡಿಕೆ

Swiggy - Zomato Boycott: Temporary Postponement: ಆಹಾರ ವಿತರಣಾ ಕಂಪನಿಗಳಾದ ಸ್ವಿಗ್ಗಿ ಹಾಗೂ ಝೊಮ್ಯಾಟೊ ವಿರುದ್ಧ ಬೆಂಗಳೂರಿನ ಹೋಟೆಲ್ ಸಂಘಟನೆಗಳು ಘೋಷಿಸಿದ್ದ ಬಹಿಷ್ಕಾರ ಚಳುವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Aug 9, 2026 - 09:58
Aug 9, 2026 - 09:58
ಸ್ವಿಗ್ಗಿ - ಝೊಮ್ಯಾಟೊ ಬಹಿಷ್ಕಾರ: ತಾತ್ಕಾಲಿಕ ಮುಂದೂಡಿಕೆ

ಬೆಂಗಳೂರು: ಆಹಾರ ವಿತರಣಾ ಕಂಪನಿಗಳಾದ ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೊ (Zomato) ವಿರುದ್ಧ ಬೆಂಗಳೂರಿನ ಹೋಟೆಲ್ ಸಂಘಟನೆಗಳು ಘೋಷಿಸಿದ್ದ ಬಹಿಷ್ಕಾರ ಚಳುವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. 

ಹೋಟೆಲ್ ಸಂಘಟನೆಗಳ ಬೇಡಿಕೆಗಳಿಗೆ ಸ್ಪಂದಿಸಿ ಎರಡು ಕಂಪನಿಗಳ ಸಿಇಒಗಳು ನಡೆಸಿದ ಸಂಧಾನ ಸಭೆ ಫಲಪ್ರದವಾಗಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಆ.15 ರಿಂದ ಎರಡು ಆ್ಯಪ್‌ಗಳ ಸೇವೆಯನ್ನು ಸ್ಥಗಿತಗೊಳಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದರು. ಆದರೀಗ ಆ ಗಡುವನ್ನು ಆ.31 ರವರೆಗೆ ವಿಸ್ತರಿಸಲಾಗಿದೆ.

ಕಳೆದ ಕೆಲವು ತಿಂಗಳಿನಿಂದ ಹೋಟೆಲ್ ಉದ್ಯಮ ಮತ್ತು ಫುಡ್ ಡೆಲಿವರಿ ಆ್ಯಪ್‌ಗಳ ಮಧ್ಯೆ ತಿಕ್ಕಾಟ ಮುಂದುವರೆದಿತ್ತು. ಅತಿಯಾದ ಕಮಿಷನ್, ಡೀಪ್ ಡಿಸ್ಕೌಂಟಿಂಗ್ ಮೂಲಕ ಗ್ರಾಹಕರನ್ನು ಸೆಳೆಯುವುದು ಹಾಗೂ ತಮ್ಮದೇ ಕ್ಲೌಡ್ ಕಿಚನ್‌ಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಹೋಟೆಲ್ ಸಂಘಟನೆಗಳು ಮುಂದಿಟ್ಟಿದ್ದವು. ಇವುಗಳನ್ನು ಬಗೆಹರಿಸದಿದ್ದರೆ ಆ.15 ರಿಂದ ಅನಿರ್ದಿಷ್ಟಾವಧಿ ಬಹಿಷ್ಕಾರ ನಡೆಸುವುದಾಗಿ ಎಚ್ಚರಿಸಿದ್ದವು.

ಇದನ್ನು ತಪ್ಪಿಸಲು, ಕಂಪನಿಗಳ ಸಿಇಒಗಳೇ ನೇರವಾಗಿ ಬಂದು ಮಾತುಕತೆ ನಡೆಸಬೇಕು ಎಂದು ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ಬೇಡಿಕೆಗೆ ಮಣಿದು, ಮೊದಲು ಝೊಮ್ಯಾಟೊ ಸಿಇಒ ಆದಿತ್ಯ ಮಂಗ್ಲಾ ಹೋಟೆಲ್ ಉದ್ಯಮಿಗಳೊಂದಿಗೆ ಸಭೆ ನಡೆಸಿದರು. ಮರುದಿನವೇ ಸ್ವಿಗ್ಗಿ ಸಿಇಒ ರೋಹಿತ್ ಕಪೂರ್ ಅವರೊಂದಿಗೂ ಸುದೀರ್ಘ ಚರ್ಚೆಯಾಯಿತು.

ಸೆಪ್ಟೆಂಬರ್ ವೇಳೆಗೆ ಶಾಶ್ವತ ಪರಿಹಾರದ ಭರವಸೆ:

ಸಭೆಯಲ್ಲಿ ಹೋಟೆಲ್ ಸಂಘಟನೆಗಳು ಮುಂದಿಟ್ಟ ಕೆಲವು ಪ್ರಮುಖ ಬೇಡಿಕೆಗಳಿಗೆ ಎರಡು ಕಂಪನಿಗಳು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿವೆ.  ಉಳಿದ ಬೇಡಿಕೆಗಳ ಕುರಿತು ತಮ್ಮ ಆಂತರಿಕ ಮಂಡಳಿಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲು ಕಂಪನಿಗಳು ಸಮಯಾವಕಾಶ ಕೇಳಿವೆ.

ಸೆಪ್ಟೆಂಬರ್ ವೇಳೆಗೆ, ಹೋಟೆಲ್ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಹಂತ-ಹಂತವಾಗಿ ಬಗೆಹರಿಸುವುದಾಗಿ, ಝೊಮ್ಯಾಟೊ ಸಿಇಒ ಆದಿತ್ಯ ಮಂಗ್ಲಾ ಅವರು ಭರವಸೆ ನೀಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆ, ಆ.15 ರಿಂದ ಜಾರಿಗೆ ಬರಬೇಕಿದ್ದ ಸೇವಾ ಸ್ಥಗಿತ ತೀರ್ಮಾನವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಆಗಸ್ಟ್ ಅಂತ್ಯದಲ್ಲಿ ಹೋಟೆಲ್ ಸಂಘಟನೆಗಳು ಮತ್ತೊಮ್ಮೆ ಸಭೆ ಸೇರಿ, ಕಂಪನಿಗಳು ನೀಡಿದ ಭರವಸೆಗಳು ಎಷ್ಟು ಈಡೇರಿವೆ ಎಂಬುದನ್ನು ಪರಿಶೀಲನೆ ಮಾಡಲಿವೆ. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ಬಹಿಷ್ಕಾರ ಚಳುವಳಿ ಮತ್ತೆ ಜಾರಿಗೆ ಬರುವ ಸಾಧ್ಯತೆಯಿದೆ. 

ಈ ಮಹತ್ವದ ಸಭೆಯಲ್ಲಿ ಅಸೋಸಿಯೇಷನ್ ಆಫ್ ಹಾಸ್ಪಿಟಾಲಿಟಿ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ಮತ್ತು ಕರ್ನಾಟಕ ಬೇಕರ್ಸ್ ಅಂಡ್ ಸ್ವೀಟ್ ಮೇಕರ್ಸ್ ಅಸೋಸಿಯೇಷನ್‌ನ ಪ್ರತಿನಿಧಿಗಳು ಭಾಗವಹಿಸಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.