ಡಿಜಿಟಲ್ ಯುಗದ ಯುವಜನತೆಗೆ ಬೇಕಿರುವುದು ತಂತ್ರಜ್ಞಾನಕ್ಕಿಂತ ವಿವೇಕದ ಮಾರ್ಗದರ್ಶನ!
Diwali: ದೀಪಾವಳಿ ಹಬ್ಬದ ಕುರಿತು ಪುತ್ತೂರಿನ 'ಸಂತ ಫಿಲೋಮಿನಾ' ಕಾಲೇಜಿನ ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಡಾ.ಭಾರತಿ ಎಸ್.ರೈ ಅವರು ಬರೆದ ವಿಶೇಷ ಲೇಖನ ಇಲ್ಲಿದೆ.
ಮಹಾಭಾರತದ ಮಹಾನ್ ತತ್ವಜ್ಞಾನವಾದ ಭಗವದ್ಗೀತೆಯು ಮನುಷ್ಯನ ಬದುಕಿಗೆ ಕೇವಲ ಧರ್ಮದ ದಾರಿಯನ್ನಷ್ಟೇ ಅನಾವರಣಗೊಳಿಸದೆ, ಪ್ರತಿಯೊಂದು ಕಾಲಘಟ್ಟದ ಸವಾಲುಗಳನ್ನು ಎದುರಿಸುವ ಜೀವನ ದರ್ಶನವನ್ನು ನೀಡಿದೆ. ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಉಪದೇಶವು ಇಂದಿನ ಆಧುನಿಕ ಜಗತ್ತಿಗೂ ಅಷ್ಟೇ ಪ್ರಸ್ತುತ. 'ಉದ್ಧರೇದಾತ್ಮನಾತ್ಮಾನಂ' ಎಂಬ ಗೀತೆಯ ಸಂದೇಶವು ಮನುಷ್ಯ ತನ್ನ ಉನ್ನತಿಗೆ ತಾನೇ ಶಕ್ತಿಯಾಗಬೇಕೆಂದು ಸಾರುತ್ತದೆ. ಜ್ಞಾನವಿದ್ದರೂ ವಿವೇಕವಿಲ್ಲದ ಬದುಕು ಅಪೂರ್ಣ, ಸ್ವಾತಂತ್ರ್ಯವಿದ್ದರೂ ಸಂಯಮವಿಲ್ಲದ ಬದುಕು ಅರ್ಥಹೀನ. ತಂತ್ರಜ್ಞಾನದ ವೇಗದಲ್ಲಿ ಮುನ್ನಡೆಯುತ್ತಿರುವ ಇಂದಿನ ಯುವಜನತೆಗೆ ಈ ಜೀವನದರ್ಶನವೇ ನಿಜವಾದ ದಾರಿದೀಪವಾಗಬೇಕಿದೆ.
ಇಂದು ಜಗತ್ತು ಬೆರಳ ತುದಿಯಲ್ಲಿದೆ. ಜ್ಞಾನ, ಮಾಹಿತಿ, ಮನರಂಜನೆ ಎಲ್ಲವೂ ಮೊಬೈಲ್ ಪರದೆಯೊಳಗೆ ಬಂಧಿಯಾಗಿವೆ. ಆದರೆ ಒಂದು ಪ್ರಶ್ನೆ ನಮ್ಮನ್ನು ಕಾಡಬೇಕಿದೆ: ಜಗತ್ತಿನೊಂದಿಗೆ ಸಂಪರ್ಕದಲ್ಲಿರುವ ಮನುಷ್ಯ ತನ್ನ ಸುತ್ತಲಿನ ಮನುಷ್ಯರಿಂದಲೇ ದೂರವಾಗುತ್ತಿದ್ದಾನೆಯೇ? ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸುತ್ತಿರುವಾಗ, ಮಾನವೀಯ ಸಂಬಂಧಗಳು ಮಾತ್ರ ಏಕೆ ಸಂಕೀರ್ಣವಾಗುತ್ತಿವೆ? ಬೆಳಕಿನ ಹಬ್ಬವಾದ ದೀಪಾವಳಿಯ ಸಂದರ್ಭದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಾಲದ ಅನಿವಾರ್ಯತೆಯಾಗಿದೆ.
ಇಂದಿನ ಯುವಜನತೆ ಡಿಜಿಟಲ್ ಜಗತ್ತಿನ ಅನಿವಾರ್ಯ ಭಾಗವಾಗಿದೆ. ಸಾಮಾಜಿಕ ಜಾಲತಾಣಗಳು ಅವರ ಅಭಿವ್ಯಕ್ತಿಗೆ ವೇದಿಕೆಯಾಗಿವೆ. ಆದರೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯ ನಡುವಿನ ಗೆರೆ ಅಳಿಸಿಹೋಗಬಾರದು. ಇತರರ ಜೀವನದೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಳ್ಳುವುದು, ಕ್ಷಣಿಕ ಜನಪ್ರಿಯತೆಯ ಹಿಂದೆ ಓಡುವುದು, ಸುಳ್ಳು ಸುದ್ದಿಗಳನ್ನು ಪರಿಶೀಲಿಸದೆ ಹಂಚಿಕೊಳ್ಳುವುದು ಮತ್ತು ವರ್ಚುವಲ್ ಜಗತ್ತಿನ ಮೆಚ್ಚುಗೆಗೆ ಅತಿಯಾದ ಮಹತ್ವ ನೀಡುವುದು ಯುವಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನವನ್ನು ಬಳಸುವವರು ನಾವೇ ಹೊರತು, ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸುವಂತಾಗಬಾರದು.
ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯೇ ಮನುಷ್ಯನನ್ನು ಮೌಲ್ಯಗಳ ಮೂಲಕ ಅಳೆಯುವುದಾಗಿದೆ. ಭಗವದ್ಗೀತೆಯ ಕರ್ಮಯೋಗದ ಸಂದೇಶವು ಫಲದ ಚಿಂತೆಯಿಲ್ಲದೆ ಕರ್ತವ್ಯ ನಿರ್ವಹಿಸುವುದನ್ನು ಬೋಧಿಸುತ್ತದೆ. ಇಂದಿನ ಯುವಜನತೆಗೆ ಇದು ಅತ್ಯಂತ ಪ್ರಸ್ತುತ. ಯಶಸ್ಸು ಎಂದರೆ ಕೇವಲ ಹಣ, ಹುದ್ದೆ ಅಥವಾ ಪ್ರಸಿದ್ಧಿಯಲ್ಲ; ಪ್ರಾಮಾಣಿಕತೆ, ಪರಿಶ್ರಮ ಮತ್ತು ಸಮಾಜಕ್ಕೆ ನೀಡುವ ಕೊಡುಗೆಯೂ ಯಶಸ್ಸಿನ ಮಾನದಂಡಗಳಾಗಬೇಕು.
ಉಪನಿಷತ್ತುಗಳ 'ಸತ್ಯಂ ವದ, ಧರ್ಮಂ ಚರ' ಎಂಬ ಉದಾತ್ತ ಸಂದೇಶವು ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವಂತೆ ಮನುಷ್ಯನಿಗೆ ಕರೆ ನೀಡುತ್ತದೆ. ಗೌತಮ ಬುದ್ಧನ ‘ಸಮ್ಯಕ್ ವಾಕ್ಕು ಮತ್ತು ಸಮ್ಯಕ್ ಕರ್ಮ’ದ ಬೋಧನೆಗಳು ಮಾತು ಮತ್ತು ಕೃತಿಗಳಲ್ಲಿ ಸಂಯಮದ ಮಹತ್ವವನ್ನು ಸಾರುತ್ತವೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಬ್ಬರನ್ನು ನೋಯಿಸುವ ಮೊದಲು, ನಮ್ಮ ಒಂದು ಮಾತು ಅವರ ಮನಸ್ಸಿನ ಮೇಲೆ ಬೀರುವ ಪರಿಣಾಮವನ್ನು ಯೋಚಿಸುವ ವಿವೇಕ ಬೆಳೆಸಿಕೊಳ್ಳಬೇಕಿದೆ.
ಯುವಜನತೆಯ ಮುಂದೆ ಇಂದು ಅವಕಾಶಗಳಷ್ಟೇ ಸವಾಲುಗಳೂ ಇವೆ. ಉದ್ಯೋಗದ ಸ್ಪರ್ಧೆ, ಆರ್ಥಿಕ ಒತ್ತಡ, ಭವಿಷ್ಯದ ಅನಿಶ್ಚಿತತೆ ಮತ್ತು ಸಾಮಾಜಿಕ ನಿರೀಕ್ಷೆಗಳು ಅವರ ಮನಸ್ಸನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸೋಲನ್ನು ಅಂತ್ಯವೆಂದು ಭಾವಿಸದೆ, ಹೊಸ ಪ್ರಯತ್ನಕ್ಕೆ ದೊರೆತ ಅನುಭವವೆಂದು ಸ್ವೀಕರಿಸುವ ಮನೋಭಾವ ಬೆಳೆಸಬೇಕು. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ದೌರ್ಬಲ್ಯವಲ್ಲ; ಅದು ಆತ್ಮಜಾಗೃತಿಯ ಸಂಕೇತ.
ಇಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಅಂಕಗಳ ಬೆನ್ನಟ್ಟುವ ಶಿಕ್ಷಣಕ್ಕಿಂತ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಇಂದಿನ ಅಗತ್ಯ. ಪಠ್ಯಜ್ಞಾನದ ಜೊತೆಗೆ ನೈತಿಕ ಶಿಕ್ಷಣ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಆರ್ಥಿಕ ಸಾಕ್ಷರತೆ ಮತ್ತು ಸಂವಿಧಾನದ ಮೌಲ್ಯಗಳ ಅರಿವು ಯುವಜನತೆಯಲ್ಲಿ ಮೂಡಬೇಕು. ಶಿಕ್ಷಕರು ಜ್ಞಾನ ನೀಡುವವರಷ್ಟೇ ಅಲ್ಲ, ವಿವೇಕವನ್ನು ಜಾಗೃತಗೊಳಿಸುವವರಾಗಬೇಕು.
ಪ್ರಕೃತಿಯೊಂದಿಗಿನ ಸಂಬಂಧವೂ ಮಾನವೀಯತೆಯಷ್ಟೇ ಮುಖ್ಯ. ಪರಿಸರ ಸಂರಕ್ಷಣೆ, ನೀರಿನ ಮಿತಬಳಕೆ, ಪ್ಲಾಸ್ಟಿಕ್ ನಿಯಂತ್ರಣ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಗಳಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳಾಗಿವೆ. ಸಮಾಜದ ಒಳಿತಿನಲ್ಲಿ ತನ್ನ ಪಾಲಿದೆ ಎಂಬ ಅರಿವು ಯುವಜನತೆಯ ವ್ಯಕ್ತಿತ್ವವನ್ನು ಸಮೃದ್ಧಗೊಳಿಸುತ್ತದೆ.
ದೀಪಾವಳಿಯ ದೀಪವು ಕತ್ತಲೆಯನ್ನು ದೂರ ಮಾಡುವ ಸಂಕೇತ. ಅದೇ ರೀತಿ ಅಜ್ಞಾನವನ್ನು ದೂರ ಮಾಡಲು ಜ್ಞಾನ, ಅಸಹಿಷ್ಣುತೆಯನ್ನು ದೂರ ಮಾಡಲು ಸಹಾನುಭೂತಿ, ಸ್ವಾರ್ಥವನ್ನು ದೂರ ಮಾಡಲು ಸೇವಾ ಮನೋಭಾವ ಮತ್ತು ನಿರಾಶೆಯನ್ನು ದೂರ ಮಾಡಲು ಆತ್ಮವಿಶ್ವಾಸದ ಬೆಳಕು ಅಗತ್ಯ.
ನಮ್ಮ ಯುವಜನತೆ ತಂತ್ರಜ್ಞಾನದಲ್ಲಿ ಆಧುನಿಕರಾಗಲಿ; ಚಿಂತನೆಯಲ್ಲಿ ವಿಶಾಲರಾಗಲಿ; ನಡವಳಿಕೆಯಲ್ಲಿ ಮೌಲ್ಯನಿಷ್ಠರಾಗಲಿ. ಪರದೆಯ ಬೆಳಕು ಅವರ ಬದುಕನ್ನು ಆವರಿಸಲಿ; ಆದರೆ ಮಾನವೀಯತೆಯ ಬೆಳಕನ್ನು ಎಂದಿಗೂ ಮಸುಕಾಗಿಸದಿರಲಿ. ಅದುವೇ ಈ ದೀಪಾವಳಿಯ ನಿಜವಾದ ಸಂದೇಶವಾಗಲಿ.
ಲೇಖಕರು: ಡಾ.ಭಾರತಿ ಎಸ್.ರೈ
ಮುಖ್ಯಸ್ಥರು, ಆಂಗ್ಲಭಾಷಾ ವಿಭಾಗ ಹಾಗೂ
ಸಾರ್ವಜನಿಕ ಸಂಪರ್ಕಾಧಿಕಾರಿ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರು