ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಾಂಶುಪಾಲ ವಂ.ಫಾ. ಡಾ.ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನವನ್ನು ಬೋಧಕ, ಬೋಧಕೇತರ ಸಿಬ್ಬಂದಿಗಳ ವತಿಯಿಂದ ಆತ್ಮೀಯವಾಗಿ ಆಚರಿಸಲಾಯಿತು.
ಕಾಲೇಜಿನ ಸಂಚಾಲಕ ವಂ.ಫಾ. ಡಾ.ಜೆ.ಬಿ.ಸಾಲ್ದಾನ್ಹಾ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಡಾ.ಮೊಂತೆರೊರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದರು. ಅವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆಗಳನ್ನು ದಾಖಲಿಸುವಂತಾಗಲಿ. ಅವರಿಗೆ ಉತ್ತಮ ಅವಕಾಶಗಳು ಲಭಿಸಿ, ಸೇಂಟ್ ಫಿಲೋಮಿನಾ ಕಾಲೇಜನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ, ಪುಷ್ಪಗುಚ್ಛ ನೀಡಿ ಡಾ.ಮೊಂತೆರೊರನ್ನು ಅಭಿನಂದಿಸಿದರು. ಈ ವೇಳೆ, ಕಾಲೇಜಿನ ಹಿಂದಿನ ಪ್ರಾಂಶುಪಾಲರನ್ನು ಸ್ಮರಿಸಿದರು. ಮೊಂತೆರೊ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಮೆಲುಕು ಹಾಕಿದರು. ಸಂಸ್ಥೆಯೊಂದಿಗಿನ ತಮ್ಮ ಸುದೀರ್ಘ ಸಂಬಂಧದ ನೆನಪುಗಳನ್ನು ಹಂಚಿಕೊಂಡರು.
ಬೋಧಕ ವೃಂದದ ಸದಸ್ಯರು ಡಾ.ಮೊಂತೆರೊ ಅವರನ್ನು ಅಭಿನಂದಿಸಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಯಶಸ್ವಿ ನಾಯಕತ್ವಕ್ಕಾಗಿ ಪ್ರಾರ್ಥಿಸಿದರು.
ಸನ್ಮಾನ ಸ್ವೀಕರಿಸಿ ಡಾ.ಆಂಟನಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿದರು. ತಮ್ಮ 50ನೇ ಜನ್ಮದಿನವನ್ನು ಆತ್ಮೀಯವಾಗಿ ಆಚರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯಾರ್ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಡೀನ್ ಡಾ.ಮಾಲಿನಿ ಅಭಿನಂದನಾ ಭಾಷಣ ಮಾಡಿದರು. ವಾಣಿಜ್ಯ ವಿಭಾಗದ ಡೀನ್ ಪ್ರೇಮಲತಾ ವಂದಿಸಿದರು. ಪ್ರಶಾಂತ್ ರೈ ಪ್ರಾರ್ಥನೆ ನೆರವೇರಿಸಿದರು. ಸುಷ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಡಾ.ವಿಜಯಕುಮಾರ್ ಮೊಳೆಯಾರ್ ನೇತೃತ್ವದಲ್ಲಿ ಸ್ಟಾಫ್ ಅಸೋಸಿಯೇಷನ್ ಸಂಯೋಜಕಿ ಡಾ.ಡಿಂಪಲ್ ಜೆ ಫೆರ್ನಾಂಡಿಸ್ ಹಾಗೂ ಹರ್ಷಿತ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು.
ಕಾರ್ಯಕ್ರಮದ ಬಳಿಕ ಡಾ.ಆಂಟನಿ ಪ್ರಕಾಶ್ ಮೊಂತೆರೊ ಆತಿಥ್ಯದಲ್ಲಿ ಭೋಜನಕೂಟ ಆಯೋಜಿಸಲಾಗಿತ್ತು. ಬೋಧಕ ವೃಂದದ ಸದಸ್ಯರು ಆತ್ಮೀಯವಾಗಿ ಭಾಗವಹಿಸಿ ಸಂಭ್ರಮಿಸಿದರು.