ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ಐಇಇಇ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ
Vivekananda Engineering College: ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು.
ಪುತ್ತೂರು: ನೀವು ವಿದ್ಯಾರ್ಥಿಯಾಗಿರಲಿ ಅಥವಾ ವೃತ್ತಿಪರರಾಗಿರಲಿ ಐಇಇಇ ಸದಸ್ಯತ್ವವು ನಿಮ್ಮನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಜಾಗತಿಕ ಸಮುದಾಯಗಳೊಂದಿಗೆ ನೇರವಾಗಿ ಜೋಡಿಸುತ್ತದೆ ಎಂದು ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೇವೇಟ್ ಲಿಮಿಟೆಡ್ ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಸುದರ್ಶನ್ ಶೆನ್ವಿ ಹೇಳಿದರು.
ವಿವೇಕಾನಂದ ಎಂಜಿನಿಯರ್ ಕಾಲೇಜಿನಲ್ಲಿ ಐಇಇಇ ಬೆಂಗಳೂರು ವಿಭಾಗ ಹಾಗೂ ಐಇಇಇ ಮಂಗಳೂರು ಉಪವಿಭಾಗ ಸಹಯೋಗದಲ್ಲಿ ಡಿಸ್ಟ್ರಿಬ್ಯೂಷನ್ ಕಂಪ್ಯೂಟಿಂಗ್, ವಿಎಲ್‌ಎಸ್‌ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೊಬೋಟಿಕ್ಸ್ ವಿಷಯಗಳನ್ನೊಳಗೊಂಡ 'ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ ಡಿಸ್ಕವರ್ 2026'ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಅವರು ಮಾತನಾಡಿದರು.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ, ಯಾವುದನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಸಮ್ಮೇಳನವೇ ಸಾಕ್ಷಿ. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಹೇಳಿದರು.
ಐಇಇಇ ಬೆಂಗಳೂರು ವಿಭಾಗದ ತಾಂತ್ರಿಕ & ಸಮ್ಮೇಳನ ಪ್ರಾಯೋಜಕತ್ವ ಸಮಿತಿ ಸಹ ಅಧ್ಯಕ್ಷ ಡಾ.ವಾಸುದೇವ ಆಚಾರ್ಯ ಮಾತನಾಡಿ, ಈ ಅಂತರರಾಷ್ಟ್ರೀಯ ಸಮ್ಮೇಳನವು ಅತ್ಯಂತ ಉತ್ತಮ ರೀತಿಯಲ್ಲಿ ನಡೆಯಿತು. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿದ್ದತೆಗಳು ಯಾವ ರೀತಿಯಲ್ಲಿದೆ ಎನ್ನುವುದಕ್ಕೆ ಇದರ ಯಶಸ್ಸೇ ಸಾಕ್ಷಿ ಎಂದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಪ್ರಸನ್ನ ದರ್ಬೆ ಮಾತನಾಡಿ, ಎಂಜಿನಿಯರಿಂಗ್ ಕಾಲೇಜಿನ ಇತಿಹಾಸದಲ್ಲಿ ಇದೊಂದು ಮುಖ್ಯ ಕಾರ್ಯಕ್ರಮವಾಗಿ ಗುರುತಿಸಲ್ಪಟ್ಟಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಔನ್ನತ್ಯಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದಕ್ಕೆ ಉತ್ಸುಕವಾಗಿದೆ ಎಂದರು.

ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಡಾ.ರಜನಿ ರೈ.ಬಿ ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನದ ವರದಿಯನ್ನು ವಾಚಿಸಿದರು. ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ರೇಶ್ಮಾ ಪೈ ಅತಿಥಿಗಳನ್ನು ಪರಿಚಯಿಸಿದರು.
ಒಟ್ಟು ಆರು ವಿಭಾಗಗಳಲ್ಲಿ ನಡೆದ ಪ್ರಬಂಧ ಮಂಡನೆಯಲ್ಲಿ ಪ್ರತಿ ವಿಭಾಗದಲ್ಲಿಯೂ ಉತ್ತಮವಾದ ಪ್ರಬಂಧಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ.ಜೀವಿತಾ.ಬಿ.ಕೆ ವಂದಿಸಿದರು. ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಶ್ರೀಶರಣ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.