ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ: ರಾಮಚಂದ್ರಾಪುರ ಶ್ರೀ
Ragaveshwara Bharathi Swamiji: ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ಊಟ ಮಾಡದೆಯೇ ಋಷಿಗಳಂತೆ ತಪಸ್ಸನ್ನು ಆಚರಿಸುವುದು ಒಂದು ವಿಧವಾದರೇ.. ಸರಿಯಾದ ಕ್ರಮದಲ್ಲಿ ಊಟ ಮಾಡುವ ಮೂಲಕವೂ ತಪಸ್ಸಿನ ಫಲವನ್ನು ಪಡೆಯಬಹುದು ಎಂದು ಯೋಗಶಾಸ್ತ್ರ ಹೇಳಿದೆ. ಹಾಗಾಗಿ ಭೋಜನವೆಂಬುದು ತಪಸ್ಸು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ನೀಡಿದರು.

ಪಾಪದ ದಾರಿಗಳಲ್ಲಿ ಆಹಾರವೇ ಪ್ರಧಾನವಾಗಿದ್ದು, ಪಾಪ ನಮ್ಮೊಳಗೆ ಸೇರಿದ ನಂತರ ಬಾಧೆಯನ್ನು ನೀಡಲು ಆರಂಭಿಸುತ್ತದೆ. ಸರಿಯಾದ ಭೋಜನ ಕ್ರಮದಿಂದ ರೋಗ ಹಾಗೂ ಪಾಪ ಎರಡನ್ನು ನಾಶ ಮಾಡಬಹುದು. ಯಾವುದು ಒಳ್ಳೆಯದೋ ಅದು ಹಿತ ಹಾಗೂ ಯಾವುದು ಇಷ್ಟವೋ ಅದು ಪ್ರಿಯ. ಹಿತವಾದದ್ದೇ ಪ್ರಿಯವಾದರೆ ದೇಹಕ್ಕೂ ಮನಸ್ಸಿಗೂ ಹಿತ ಎಂದು ಅಭಿಪ್ರಾಯಪಟ್ಟರು.
ದೇಹದ ಒಳಗೆ ಹೋಗುವ ಶ್ವಾಸ ಮತ್ತು ಆಹಾರದಿಂದಲೇ, ಅಲ್ಲಿ ಪಾಪವನ್ನು ನಾಶಮಾಡಲು ಸಾಧ್ಯ. ವಿಧಿಪೂರ್ವಕವಾದ ಪ್ರಾಣಾಯಾಮ ಹಾಗೂ ಸಮರ್ಪಕ ಆಹಾರ ಕ್ರಮದಿಂದ ದೇಹದ ಪಾಪವನ್ನು ತೊಳೆದುಕೊಳ್ಳಬಹುದು ಎಂದರು.

ಭೋಜನವನ್ನು ತಪಸ್ಸೆಂದು ಹೇಳಿದ್ದು, ಆಹಾರದಲ್ಲಿ ಹಿತ - ಮಿತ ಎಂಬುದು ವ್ಯಕ್ತಿಗತವಾಗಿದ್ದು, ವೃತ್ತಿ ಪ್ರವೃತ್ತಿ, ಹಿನ್ನೆಲೆ ಇತ್ಯಾದಿಗಳನ್ನು ಆಧರಿಸಿ ವ್ಯಕ್ತಿಯ ಹಿತ ಮಿತಗಳು ನಿರ್ಧಾರವಾಗುತ್ತದೆ. ಯಜ್ಞಕ್ಕೆ ಯೋಗ್ಯವಾದ ಆಹಾರಕ್ಕೆ ಮೇಧ್ಯಾ ಎಂಬ ಹೆಸರಿದ್ದು, ಅಂತಹ ಉತ್ಕೃಷ್ಟ ಆಹಾರವನ್ನು ಸ್ವೀಕರಿಸುವುದರಿಂದ ನಮ್ಮೊಳಗಿನ ಅಗ್ನಿಯನ್ನು ಜಾಗೃತ ಗೊಳಿಸಬಹುದು. ದೇಹವೆಂಬ ಪೆಟ್ಟಿಗೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೂ ಅಗ್ನಿಜಾಗರಣ ಉತ್ತರವಾಗಿದೆ ಎಂದು ತಿಳಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ನ ಸಿಓಓ ಬಿ.ಎಸ್.ರಾಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.

ರಾಮಮೂರ್ತಿ ಕೆ.ಬಿ ದಂಪತಿಗಳು ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ಸುರೇಶ ಕಲ್ಲಬ್ಬೆ, ಉದಯ ಭಟ್, ಕಿರಣ ಹೆಗಡೆ, ದಿನ ಪ್ರಧಾನರಾದ ಗುಂಡಿ ಮಂಜಪ್ಪ ದಂಪತಿಗಳು ಇದ್ದರು.
ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ :
ಪರಂಪರಾಗತವಾಗಿ ಶ್ರೀರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳುತ್ತಿರುವ ಹಾಲಕ್ಕಿ ಸಮಾಜದವರು ಸಮರ್ಪಿಸಿದ ಸ್ವರ್ಣಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಹಾಲಕ್ಕಿ ಸಮಾಜದವರು ಶ್ರೀಮಠದ ಕೆಕ್ಕಾರು ಶಾಖಾ ಮಠಕ್ಕೆ ಪರಂಪರೆಯಿಂದ ತಮ್ಮ ಶ್ರದ್ಧಾಭಕ್ತಿಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ, ಅದರಲ್ಲಿ ತಮ್ಮ ಹಿತವನ್ನು ಕಂಡಿದ್ದಾರೆ. ಹಾಲಕ್ಕಿ ಸಮಾಜದ ಜೊತೆ ಶ್ರೀಮಠ ಸದಾ ಜೊತೆಗಿರಲಿದ್ದು, ಸರ್ಕಾರವು ಕೂಡ ಈ ಸಮಾಜಕ್ಕೆ ಸಲ್ಲಬೇಕಾದ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಅನ್ನಬ್ರಹ್ಮ ಚಾತುರ್ಮಾಸ್ಯದಲ್ಲಿ ಹಾಲಕ್ಕಿ ಸಮಾಜಕ್ಕೆ ಅಕ್ಕಿಯನ್ನು ಆಶೀರ್ವಾದ ಪೂರ್ವಕವಾಗಿ ಕೊಡಲಾಗಿದೆ. ಆ ಸಮಾಜಕ್ಕೆ ಒಳಿತಾಗಲಿ ಎಂದು ಆಶೀರ್ವಾದಿಸಿದರು.
ಹಾಲಕ್ಕಿ ಸಮಾಜದ ಪರವಾಗಿ ಡಾ.ಹನುಮಂತ ಗೌಡರು ಮಾತನಾಡಿ, ನಾವು ತಲೆತಲಾಂತರದಿಂದ ಶ್ರೀಮಠಕ್ಕೆ ನಡೆದುಕೊಳ್ಳುತ್ತಾ ಬಂದಿದ್ದು, ಶ್ರೀಗುರು ಪರಂಪರೆಯ ಆಶೀರ್ವಾದದಿಂದ ನಮ್ಮ ಸಮಾಜ ಉತ್ತಮ ಮಾರ್ಗದಲ್ಲಿ ಸಾಗುತ್ತಿದೆ. ನಾವು ಇದರಲ್ಲಿ ನೆಮ್ಮದಿ ಕಂಡಿದ್ದೇವೆ ಎಂದರು.
ಹಾಲಕ್ಕಿ ಜಾನಪದ ಹಾಡಿನ ಮೂಲಕ ಶ್ರೀಗುರು ಪೀಠದ ಕುರಿತಾಗಿ ತಮಗಿರುವ ಭಕ್ತಿಯನ್ನು ಸಮರ್ಪಿಸಿದರು. ಬಿ.ಎಸ್ ಗೌಡರ್,
ಎಸ್. ಜಿ ಗೌಡರ್ ಹಾಗೂ ಮಂಜುನಾಥ ಗೌಡರ್ ಕೆಕ್ಕಾರು ಸೇರಿದಂತೆ ನೂರಾರು ಹಾಲಕ್ಕಿ ಗುರು ಬಂಧುಗಳು ಭಾಗವಹಿಸಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.