ಉಪವಾಸದಿಂದ ದೇಹ - ಮನಸ್ಸು ಹಗುರ: ರಾಮಚಂದ್ರಾಪುರ ಶ್ರೀ

Ragaveshwara Bharathi Swamiji: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ 'ಉಪವಾಸ'ದ ಕುರಿತಾಗಿ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.

Aug 12, 2026 - 10:11
ಉಪವಾಸದಿಂದ ದೇಹ - ಮನಸ್ಸು ಹಗುರ: ರಾಮಚಂದ್ರಾಪುರ ಶ್ರೀ

ಗೋಕರ್ಣ: ಉಪವಾಸ ಸರಿಯಾಗಿ ಮಾಡಿದಾಗ ನಿಶ್ಯಕ್ತಿಯಾಗುವುದಲ್ಲ. ಅದು ಬಲವೃದ್ಧಿಗೆ ಸಹಕಾರಿ. ಉಪವಾಸದಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಹೃದಯದಲ್ಲಿ ಶುದ್ಧತೆ, ದೇಹದಿಂದ ಬೇಡವಾದ ಅಂಶಗಳ ನಿರ್ಗಮನ, ಬಾಯಿ-ಗಂಟಲುಗಳ ಶುದ್ಧತೆ, ಹಿತವಾದ ಹಸಿವು ಮುಂತಾದವುಗಳು ಸರಿಯಾಗಿ ಉಪವಾಸವನ್ನು ನಡೆಸಿದಾಗ ಸಿಗುವ ಪ್ರಯೋಜನಗಳಾಗಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ (Ragaveshwara Bharathi Swamiji) ಹೇಳಿದರು. 

ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ 'ಉಪವಾಸ'ದ ಕುರಿತಾಗಿ ಪ್ರವಚನ ನೀಡಿದರು.

'ಉಪವಾಸದಲ್ಲಿ ಹಲವಾರು ವಿಧಗಳಿವೆ. ನಾವು ಯಾವುದಾದರೂ ವಿಷಯದಲ್ಲಿ ತಲ್ಲೀನರಾದಾಗ ನಡೆಯುವ ಉಪವಾಸ ಒಂದು ರೀತಿಯಾದರೆ, ಧರ್ಮಶಾಸ್ತ್ರದ ಪ್ರಕಾರ ಮೂರು ರೂಪದ ಉಪವಾಸಗಳಿವೆ. ದಿನದಲ್ಲಿ ಎರಡು ಹೊತ್ತು ಮಾತ್ರ ಊಟ ಮಾಡಿ, ನಡುವೆ ಯಾವುದೇ ಆಹಾರ ಸ್ವೀಕರಿಸದಿರುವುದು ನಿತ್ಯೋಪವಾಸ ಎನಿಸಿಕೊಂಡಿದೆ. ಏಕಾದಶಿ, ಶಿವರಾತ್ರಿಗಳಲ್ಲಿ ಮಾಡುವ ಉಪವಾಸವು ವ್ರತೋಪವಾಸ ಮತ್ತು ಕೃಚ್ಛ್ರ ಎಂಬ ಉಪವಾಸ ವಿಧಿಯು ಪಾಪವನ್ನು ತೊಳೆದುಕೊಳ್ಳುವ ವಿಧವಾಗಿದೆ. ಶಾಸ್ತ್ರಗಳಲ್ಲಿ ಅನೇಕ ವಿಧವಾದ ಕೃಚ್ಛ್ರ ಉಪವಾಸವನ್ನು ಸೂಚಿಸಲಾಗಿದ್ದು, ಬೇರೆಬೇರೆ ಪಾಪಗಳನ್ನು ತೊಳೆದುಕೊಳ್ಳಲು ಇರುವ ಪ್ರಾಯಶ್ಚಿತ್ತ ಉಪವಾಸಗಳು ಇವಾಗಿವೆ' ಎಂದರು.

ಆಯುರ್ವೇದ ಶಾಸ್ತ್ರವೂ ಉಪವಾಸವನ್ನು ಹೇಳಿದ್ದು, ಊಟವನ್ನು ಸರಿಯಾಗಿ ಮಾಡಿದರೆ ಹಲವು ರೋಗಗಳ ಪರಿಹಾರವಾಗುತ್ತವೆ. ಊಟದಿಂದ ಪರಿಹಾರವಾಗದಿರುವುದು ಉಪವಾಸದಿಂದ ಪರಿಹಾರ ಮಾಡಿಕೊಳ್ಳಲು ಸಾಧ್ಯ. ಊಟ ಹಾಗೂ ಉಪವಾಸ ಎರಡರಲ್ಲಿಯೂ ಪರಿಹಾರವಾಗದಿರುವುದಕ್ಕೆ ಮಾತ್ರ ಆಯುರ್ವೇದ ಔಷಧವನ್ನು ಸೂಚಿಸುತ್ತದೆ ಎಂದು ತಿಳಿಸಿದರು.

ತಪ್ಪಾದ ರೀತಿಯಲ್ಲಿ ಅಥವಾ ಅತಿಯಾಗಿ ಉಪವಾಸವನ್ನು ಮಾಡಿದರೆ ಸಂಧಿನೋವು, ದೇಹದ ದುರ್ಬಲತೆ, ಬಾಯಾರಿಕೆ, ಹಸಿವಿನ ನಾಶ, ರುಚಿ ಕಡಿಮೆಯಾಗುವುದು, ಮಾನಸಿಕ ಅಸಮತೋಲನ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು. ಧಾರ್ಮಿಕ ಉಪವಾಸಗಳನ್ನು ಕೂಡ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು, ಅತಿಹಸಿವು ಅಥವಾ ಬಾಯಾರಿಕೆ ಇರುವವರು ಮತ್ತು ಕೆಲವು ಕಾಯಿಲೆಗಳಿರುವವರು ಸ್ವಯಂಪ್ರೇರಿತವಾಗಿ ಉಪವಾಸ ಮಾಡಬಾರದು ಎಂದು ಎಚ್ಚರಿಸಿದರು.

ಆಹಾರ ಮತ್ತು ಉಪವಾಸ ಎರಡು ದೇಹದ ಸಹಜ ಪ್ರಕ್ರಿಯೆ. ಆಯುರ್ವೇದ, ಆಧ್ಯಾತ್ಮಿಕತೆ ಹಾಗೂ ಸರಿಯಾದ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು. ಊಟವಾಗಲಿ, ಉಪವಾಸವಾಗಲಿ ಜ್ಞಾನಪೂರ್ವಕವಾಗಿ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಸರಿಯಾದ ಆಹಾರ ಹಾಗೂ ಉಪವಾಸಗಳು ಆರೋಗ್ಯ - ಆಧ್ಯಾತ್ಮಿಕ ಪ್ರಗತಿಗೆ ಸಹಾಯಕ. ಆದರೆ ಜ್ಞಾನವಿಲ್ಲದೆ ಮಾಡಿದರೆ ಎರಡು ಹಾನಿಕರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಖ್ಯಾತ ಉದ್ಯಮಿ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ್ ದಂಪತಿಗಳು ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆಗಳಲ್ಲಿ ಭಾಗವಹಿಸಿ, ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸಿದ್ದಾಪುರ ಹವ್ಯಕ ಮಂಡಲದ ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪಇಡುವಾಣಿ ವಲಯಗಳ ಪರವಾಗಿ ಬಿ.ಎಸ್.ಮಂಜುನಾಥ ಶರ್ಮಾ ದಂಪತಿಗಳು ಗುರುಭಿಕ್ಷಾ ಸೇವೆ ನೆರವೇರಿಸಿದರು. ಕೆ. ಎನ್.ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ, ದಿನ ಪ್ರಧಾನರಾಗಿ ರಾಧಾಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.