ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ನಾಳೆ ಹೊಸ ದಾಖಲೆ

ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆಯಲಿದ್ದಾರೆ. ಈ ವರೆಗೆ ಸುದೀರ್ಘ ಸಿಎಂ ಹೆಗ್ಗಳಿಗೆ ಭಾಜನರಾಗಿದ್ದ ದೇವರಾಜ ಅರಸು ಅವರ ರೆಕಾರ್ಡ್ ನಾಳೆ ​​ಬ್ರೇಕ್​​ ಆಗಲಿದೆ. ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಲೇ ಎಲ್ಲರಿಗಿಂತ ಮುಂದಿದ್ದು, ಅವರ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.

Jan 5, 2026 - 12:12
ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ನಾಳೆ ಹೊಸ ದಾಖಲೆ
siddaramaih

ಬೆಂಗಳೂರು: ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ದಾಖಲೆಯನ್ನು ನಾಳೆ ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು ಕರ್ನಾಟಕದ ಸಿಎಂ‌ ಆಗಿದ್ದ‌ರು. ಸಿದ್ದರಾಮಯ್ಯ ಕೂಡ ಇಂದಿಗೆ 7 ವರ್ಷ 239 ದಿನ ಪೂರೈಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಸ್​. ನಿಜಲಿಂಗಪ್ಪ ಅವರಿದ್ದು, 7 ವರ್ಷ 175 ದಿನಗಳ ಕಾಲ ಅವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 4ನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ 5 ವರ್ಷ 216 ದಿನ ಮತ್ತು 5 ವರ್ಷ 82 ದಿ‌ನ ಸಿಎಂ ಆಗಿದ್ದ ಬಿ.ಎಸ್​. ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ. 

ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯ ಮೊದಲ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನ ಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣಕ್ಕೆ ಜೆಡಿಎಸ್​​ ಜೊತೆ ಸೇರಿ ಕಾಂಗ್ರೆಸ್​​ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನವಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಅದಾದ ಬಳಿಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್​​ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಲೋಕದಳ, ಜನತಾ ದಳ ಪಕ್ಷಗಳಲ್ಲಿಯೂ ಈ ಹಿಂದೆ ಇದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್​​ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ವಿಪಕ್ಷ ನಾಯಕನಿಂದ ಹಿಡಿದು ಮುಖ್ಯಮಂತ್ರಿ ಕುರ್ಚಿಯನ್ನೂ ಇದೀಗ ಎರಡನೇ ಬಾರಿ ಏರಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್​​ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ವಿಶಿಷ್ಠ ದಾಖಲೆ ಬರೆಯುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ಸಂಭ್ರಮಾಚರಣೆಗೆ ಅದಾಗಲೇ ತಯಾರಿ ನಡೆದಿದೆ. ದೀರ್ಘವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ ಎಂದು ಶುಭಾಶಯ ಕೋರಿರುವ ಪೋಸ್ಟರ್​​ನ ಅಭಿಮಾನಿಗಳು ಮುಖ್ಯಮಂತ್ರಿಗಳ ನಿವಾಸದ ಬಳಿ ಹಾಕಿದ್ದಾರೆ. ಕಾವೇರಿ ನಿವಾಸದ ಎದುರಿಗಿನ ಸರ್ಕಲ್ ಬಳಿ ಬ್ಯಾನರ್​​ ರಾರಾಜಿಸುತ್ತಿದೆ.