VTU–VishwaBharat Skill Institute: ವಿಟಿಯು-ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್ ನಡುವೆ ಒಪ್ಪಂದ
VTU–VishwaBharat Skill Institute: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್ ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆ (ಎಂಒಯು) ಏರ್ಪಟ್ಟಿದೆ.
ಬೆಂಗಳೂರು: ಉದ್ಯಮ ವಲಯದ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ ಕೌಶಲ ಹೊಂದಿದ ಪ್ರತಿಭಾವಂತರನ್ನು ರೂಪಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್ ನಡುವೆ ಮಹತ್ವದ ತಿಳಿವಳಿಕೆ ಒಡಂಬಡಿಕೆ (ಎಂಒಯು) ಏರ್ಪಟ್ಟಿದೆ.
ಈ ಸಹಯೋಗದಡಿ ಬೆಂಗಳೂರಿನ ನಾಗರಭಾವಿಯಲ್ಲಿರುವ ವಿಟಿಯು ಪ್ರಾದೇಶಿಕ ಕಚೇರಿಯಲ್ಲಿ ಅತ್ಯಾಧುನಿಕ ಫಿನಿಶಿಂಗ್ ಸ್ಕೂಲ್ ಶ್ರೇಷ್ಠತಾ ಕೇಂದ್ರ (ಸಿಒಇ) ಸ್ಥಾಪನೆಯಾಗಲಿದೆ.
ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮಕ್ಕೆ ಅಗತ್ಯವಾದ ಕೌಶಲಗಳನ್ನು ಒದಗಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಇದರ ಭಾಗವಾಗಿ ಏಳು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆರು ತಿಂಗಳ ಉಚಿತ ಫಿನಿಶಿಂಗ್ ಸ್ಕೂಲ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಏಳು ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತರಬೇತಿ:
- ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂಎಲ್) ಮತ್ತು ಡೇಟಾ ಅನಾಲಿಟಿಕ್ಸ್ ಒಳಗೊಂಡ ಅಡ್ವಾನ್ಸ್ಡ್ ಅನಾಲಿಟಿಕ್ಸ್
- ಐಟಿ ಮೂಲಸೌಕರ್ಯ ನಿರ್ವಹಣೆ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಡೇಟಾ ಸೆಂಟರ್ ತಂತ್ರಜ್ಞಾನ
- ಸೈಬರ್ ಸೆಕ್ಯುರಿಟಿ ಮತ್ತು ಆಪರೇಷನಲ್ ಟೆಕ್ನಾಲಜಿ (ಒಟಿ) ಭದ್ರತೆ
- ಎಂಬೆಡೆಡ್ ಸಿಸ್ಟಮ್ಸ್, ಇಂಡಸ್ಟ್ರಿಯಲ್ ಐಒಟಿ, ಎಐ ಹಾಗೂ ಎಡ್ಜ್ ಕಂಪ್ಯೂಟಿಂಗ್ ಒಳಗೊಂಡ ಸ್ಮಾರ್ಟ್ ಸಿಸ್ಟಮ್ಸ್
- ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ
- ಡಿಜಿಟಲ್ ಮೀಡಿಯಾ ಹಾಗೂ ಫುಲ್ಸ್ಟ್ಯಾಕ್ ಪ್ರಾಡಕ್ಟ್ ಡೆವಲಪ್ಮೆಂಟ್
- ಎಂಟರ್ಪ್ರೈಸ್ ಸಾಫ್ಟ್ವೇರ್ ಕ್ಷೇತ್ರದ ಎಸ್ಎಪಿ ತಂತ್ರಜ್ಞಾನಗಳಲ್ಲಿ ತರಬೇತಿ ನೀಡಲಾಗುತ್ತದೆ.
ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಉದ್ಯಮದ ನೈಜ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ಕೌಶಲ ಮತ್ತು ಉದ್ಯೋಗಕ್ಕೆ ಅಗತ್ಯವಾದ ಪ್ರಾಯೋಗಿಕ ಅನುಭವವನ್ನು ಬೆಳೆಸುವ ಗುರಿ ಹೊಂದಿವೆ.
3 ವರ್ಷಗಳಲ್ಲಿ 3,000 ವಿದ್ಯಾರ್ಥಿಗಳಿಗೆ ತರಬೇತಿ ಗುರಿ:
ಮುಂದಿನ ಮೂರು ವರ್ಷಗಳಲ್ಲಿ 3,000 ವಿದ್ಯಾರ್ಥಿಗಳು ಮತ್ತು 250 ಬೋಧಕರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಗುರಿಯನ್ನು ಈ ಉಪಕ್ರಮ ಹೊಂದಿದೆ. ಪಠ್ಯಕ್ರಮವನ್ನು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲು 100ಕ್ಕೂ ಹೆಚ್ಚು ಉದ್ಯಮ ತಜ್ಞರು ಸ್ವಯಂಪ್ರೇರಿತವಾಗಿ (ಪ್ರೊ ಬೊನೊ) ಮಾರ್ಗದರ್ಶನ ನೀಡಲಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಕ್ಕೂ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ 20ಕ್ಕೂ ಹೆಚ್ಚು ನೇಮಕಾತಿ ಕಂಪನಿಗಳೊಂದಿಗೆ ಸಹಯೋಗದ ವ್ಯವಸ್ಥೆ ರೂಪಿಸುವ ಯೋಜನೆ ಹೊಂದಲಾಗಿದೆ. ಇದರಿಂದ ವಿದ್ಯಾರ್ಥಿಗಳು ತರಬೇತಿ ಪೂರ್ಣಗೊಳಿಸಿದ ಬಳಿಕ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಲು ಅಗತ್ಯವಾದ ಕೌಶಲ ಮತ್ತು ಮಾರ್ಗದರ್ಶನ ಪಡೆಯಲಿದ್ದಾರೆ.
ಉದ್ಯಮ ತಜ್ಞರು ಮತ್ತು ಶಿಕ್ಷಣ ಕ್ಷೇತ್ರದ ಗಣ್ಯರ ಸಹಭಾಗಿತ್ವ:
ಈ ಉಪಕ್ರಮದ ಎಂಒಯು ಸಹಿ ಸಮಾರಂಭದಲ್ಲಿ ವಿಟಿಯು ಉಪಕುಲಪತಿ ಡಾ.ಎಸ್.ವಿದ್ಯಾಶಂಕರ್, ಉದ್ಯಮ ನಾಯಕ ಹಾಗೂ ದಾನಿ ಎಂ.ಆರ್. ನರಸಿಂಹಮೂರ್ತಿ, ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ಬೆನ್ನುಮೂಳೆ ಮತ್ತು ಮೂಳೆ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಹೆಚ್ ಬಿಜ್ಜವಾರ, ಆಟೊಮೋಟಿವ್ ಸ್ಕಿಲ್ಸ್ ಡೆವಲಪ್ಮೆಂಟ್ ಕೌನ್ಸಿಲ್ನ (ಎಎಸ್ಡಿಸಿ) ಸಲಹೆಗಾರ ಸತ್ಯನಾರಾಯಣ ಎಂ, ಜೆಎಸ್ಎಸ್ ಆರೋಗ್ಯ ಮತ್ತು ಶೈಕ್ಷಣಿಕ ಟ್ರಸ್ಟ್ನ ಅಧ್ಯಕ್ಷ ಪದ್ಮನಾಭನ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ವಿಟಿಯು ಮತ್ತು ವಿಶ್ವಭಾರತ್ ಸ್ಕಿಲ್ ಇನ್ಸ್ಟಿಟ್ಯೂಟ್ನ ಈ ಸಹಯೋಗವು ಉನ್ನತ ಶಿಕ್ಷಣ ಮತ್ತು ಉದ್ಯಮ ವಲಯದ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜತೆಗೆ, ಯುವಜನರಿಗೆ ಉದ್ಯೋಗಾಧಾರಿತ ತಂತ್ರಜ್ಞಾನ ಕೌಶಲ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನುರಿತ ಮಾನವ ಸಂಪನ್ಮೂಲವನ್ನು ರೂಪಿಸುವ ಮೂಲಕ ರಾಜ್ಯದ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.